+91 96066 68597 vidyadansamiti1920@gmail.com
ವಿದ್ಯಾದಾನ ಸಮಿತಿ ಶತಮಾನೋತ್ಸವ ಚಟುವಟಿಕೆಗಳಿಗೆ ಚಾಲನೆ
ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿದ್ಯಾದಾನ ಸಮಿತಿ ಕೊಡುಗೆ ಅಪಾರ
-ಮೃತ್ಯುಂಜಯ ಸಂಕೇಶ್ವರ
ಶಿಕ್ಷಣ ಕ್ಷೇತ್ರದಲ್ಲಿ ನಿರಂತರ 100 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿರುವ ವಿದ್ಯಾದಾನ ಸಮಿತಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದೆ ಎಂದು ಗಣ್ಯ ಮುದ್ರಣೋದ್ಯಮಿಗಳು ಹಾಗೂ ವಿದ್ಯಾದಾನ ಸಮಿತಿ ವಿದ್ಯಾರ್ಥಿಗಳಾದ ಮೃತ್ಯುಂಜಯ ಸಂಕೇಶ್ವರ ಹೇಳಿದರು.
ಅವರು ಗದುಗಿನ ಅಂಬೇಡ್ಕರ್ ಸಭಾ ಭವನದಲ್ಲಿ ಪ್ರದರ್ಶನಕ್ಕೆ ಮುನ್ನ ದೀಪ ಬೆಳಗಿಸುವುದರ ಮೂಲಕ ವಿದ್ಯಾದಾನ ಸಮಿತಿಯ ಶತಮಾನೋತ್ಸವ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. 1920ರಲ್ಲಿ ಓರ್ವ ಶಿಕ್ಷಕ ಹಾಗೂ 8 ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆ ಇದೀಗ ಹೆಮ್ಮರವಾಗಿ ಬೆಳೆದಿದ್ದು ಲಕ್ಷಾಂತರ ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದೆ. ಸಂಸ್ಥೆಯ ಶತಮಾನೋತ್ಸವದ ನಿಮಿತ್ತವಾಗಿ ನಡೆಯುವ ಎಲ್ಲ ಚಟುವಟಿಕೆಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ವಿದ್ಯಾದಾನ ಸಮಿತಿ ಹಳೆಯ ವಿದ್ಯಾರ್ಥಿನಿವೃತ್ತ ಬ್ಯಾಂಕ್ ಮ್ಯಾನೇಜರ್ ವಿಜಯ ಮೇಲಗಿರಿ ಮಾತನಾಡಿ ವಿದ್ಯಾದಾನ ಸಮಿತಿಯು 1920ರಲ್ಲಿ ನಾಟಕ ಪ್ರದರ್ಶನಗಳ ಮೂಲಕ ಪ್ರಾರಂಭಗೊಂಡಿದ್ದು, ಇದೀಗ 100 ವರ್ಷಗಳ ನಂತರ ಮತ್ತೆ ನಾಟಕ ಪ್ರದರ್ಶನ ಮೂಲಕ ಶತಮಾನೋತ್ಸವ ಚಟುವಟಿಕೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇದಕ್ಕೆ ವಿದ್ಯಾದಾನ ಸಮಿತಿಯ ಎಲ್ಲ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಹಾಯ ಸಹಕಾರ ಅವಶ್ಯಕವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾದಾನ ಸಮಿತಿಯ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡುತ್ತಿರುವ ಶಾಂತಾಬಾಯಿ ಮೇಲಗಿರಿ ಅವರನ್ನು ವಿದ್ಯಾದಾನ ಸಮಿತಿ ಸದಸ್ಯರಾದ ಶುಭಲಕ್ಷ್ಮೀ ಹುಯಿಲಗೋಳ ಸನ್ಮಾನಿಸಿ ಗೌರವಿಸಿದರು.
ಪ್ರಾರಂಭದಲ್ಲಿ ವಿದ್ಯಾದಾನ ಸಮಿತಿ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ಸ್ವಾಗತಿಸಿದರು. ಪ್ರಸಿದ್ಧ ರಂಗಕರ್ಮಿಗಳಾದ ಯಶವಂತ ಸರದೇಶಪಾಂಡೆ, ಹಿರಿಯ ಹವ್ಯಾಸಿ ರಂಗಭೂಮಿ ಕಲಾವಿದರಾದ ಮುಕುಂದ ಪೋತ್ನಿಸ್, ಹಾಸ್ಯ ವಾಗ್ಮಿಗಳಾದ ಪ್ರೊ. ಅನೀಲ ವೈದ್ಯ, ಗಣ್ಯ ವರ್ತಕರಾದ ವಿಜಯಕುಮಾರ ಭಾಗಮಾರ, ಐ.ಎಂ.ಎ. ಅದ್ಯಕ್ಷರಾದ ಡಾ.ಪ್ಯಾರಾಲಿ ನೂರಾನಿ, ಡಾ.ಶೇಖರ ಸಜ್ಜನರ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿದ್ಯಾದಾನ ಸಮಿತಿ ಅಧ್ಯಕ್ಷರಾದ ಧೀರೇಂದ್ರ ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು. ಡಾ.ದತ್ತಪ್ರಸನ್ನ ಪಾಟೀಲ ನಿರೂಪಿಸಿ ವಂದಿಸಿದರು.