+91 96066 68597 vidyadansamiti1920@gmail.com
VIDYA DAN SAMITI ON THE THRESHOLD OF CENTURY
A Glorious History of Vidya Dan Samiti
Vidya Dan Samiti Gears up to celebrate the centenary
(Article by Gururaj Jamkhandi)
In the pantheon of India’s freedom fighters, many a sanctum is reserved for heroes from North Karnataka who resisted the oppression of the colonial masters, intent on freeing their motherland from the tyranny of imperialism. That this small region of South India made a contribution so disproportionately large to the struggle for Independence owes considerably to the educational institutions that instilled in students a fiery nationalist spirit, creating minds readily receptive to ideas of revolution. The Vidya Dan Samiti (VDS) in Gadag-Betgeri, the centenary of which fortuitously coincided with India celebrating her platinum jubilee as an independent country, was one such institution.
The VDS will celebrate its centenary on November 12th and 13th with Infosys Foundation’s chairwoman Sudha Murthy flagging the celebrations.
Founded in 1920 by young nationalists the school has since grown in stature, and in size. The brigade of patriots was led by NV Huilgol, who would rise to be designated an honorary magistrate and earn the sobriquet ‘Sab Narayanrao’, who along with Shirinivasrao, set up the school. The VDS is today an umbrella organisation that runs two high schools, a pre-university college, and an institution that offers B.Ed. The school and the constituent colleges administered by VDS boast among its alumni many prominent personalities, who have distinguished themselves across various fields.
N V and Srinivasrao Huilgol were inspired to start a school that would churn out patriots in droves in response to a call issued by ‘Lokmanya’ Balgangadhar Tilak. The multi-faceted lawyer Huilgol Narayanrao, playwright and poet best remembered for penning ‘Udayavaagali namma cheluva Kannada naadu ’, extended his invaluable support to the enterprise.
The vast front yard of Naraynrao Kurtakoti’s house on Vakil Chawl was the address of the school, when it first started. With the assistance of GG Page, Narayanacharya Gudi, Madhwarao Kulkarni, all of whom were Huilgol and Srinivasarao’s teammates in the ‘Young Men Football Team’, the school began to flourish. Huilgol Narayanrao wrote two many dramas to help raise funds for the school. In no time, the school left its humble abode and started operating out of a 15-acre property on Kittur Chennamma Road.
In 1946, a girls’ school was founded, while the annexures, Smt Mohanabai Chavan Hall, Rao Bahaddur GK Gokhale Wing and VN Chafekar Hall were added to the main structure.
The students of the school considered themselves blessed to have the opportunity of learning at the feet of veritable stalwarts such as G K Hungund, Jnapith award recipient Da Ra Bendre, whose efforts to raise the institution’s academic standards were supplemented by KSN Iyengar. Keertinath Kurtakoti, a pre-eminent critic of Kannada letters, too served as a teacher at the school for a brief period.
Members of the Huilgol family, including Dharmarao, Bhimrao and Manorama, strove tirelessly to ensure that the school’s infrastructure did not go wanting. This ensured that the students excelled not only in academics but also in sport and other extra-curricular activities.
Today, the eight institutions under the VDS umbrella cumulatively boast more than 2,000 students, and it is counted among one of the more reputable organisations in the region.
*The Path trodden by Vidya Dan Samiti*
ಶತಮಾನೋತ್ಸವದ ಸಂಭ್ರಮದಲ್ಲಿ ವಿದ್ಯಾದಾನ ಸಮಿತಿ
‘ವಿದ್ಯಾದಾನ ಸಮಿತಿಯ ಇತಿಹಾಸದ ಸಂಕ್ಷಿಪ್ತ ಪರಿಚಯ’
ಲೋಕಮಾನ್ಯ ತಿಲಕರ ದಟ್ಟವಾದ ಪ್ರಭಾವಕ್ಕೆ ಒಳಗಾಗಿದ್ದ ಉತ್ತರ ಕರ್ನಾಟಕದಲ್ಲಿ ಹೊಸ ಅಲೆಯ ಸಂಚಾರವಾಗತೊಡಗಿತ್ತು. 1920 ರಲ್ಲಿ ಮಹಾತ್ಮಾ ಗಾಂಧೀಜಿಯವರು ಭಾರತದ ರಾಜಕೀಯ ಆಗಸದಲ್ಲಿ ಮಿನುಗುವದರಲ್ಲಿದ್ದರು. ಈ ಕಾಲಘಟ್ಟದಲ್ಲಿ ಗದುಗಿನಲ್ಲಿ ವಿದ್ಯಾದಾನ ಸಮಿತಿ ಮಹೋನ್ನತ ಉದ್ದೇಶಗಳನ್ನು ಅಂತರ್ಗತ ಮಾಡಿಕೊಂಡು, ಶಿಕ್ಷಣ ಕ್ರಾಂತಿಗೆ ಹೊಸ ನಾಂದಿ ಹಾಡಿತು. ಗಾಂಧೀಜಿಯವರ ಅಸಹಕಾರ ಆಂದೋಲನ ಪ್ರಾರಂಭವಾಗುವದರಲ್ಲಿತ್ತು. ಬಿರುಗಾಳಿಯಂತೆ ಬಂದು ದೇಶವನ್ನೇ ತಲ್ಲಣಗೊಳಿಸಿದ್ದ ‘ಸ್ಪಾನಿಶ್ ಫ್ಲೂ’ ಕೊನೆಗೊಂಡು ಚೇತರಿಸಿಕೊಳ್ಳತೊಡಗಿತ್ತು. ಇಂತಹ ಸಂದರ್ಭದಲ್ಲಿ ಕುಮಾರವ್ಯಾಸನ ಆರಾಧ್ಯದೈವವಾಗಿದ್ದ ಶ್ರೀ ವೀರನಾರಾಯಣ ನೆಲೆಗೊಂಡ ಗದುಗಿನಲ್ಲಿ ಕೆಲ ಅದ್ಭುತ ಚೇತನಗಳು ಒಂದಾಗಿ ಹೊಸ ಸಮಾಜ ಸೃಷ್ಟ್ಟಿಸುವ ವಿದ್ಯೆಯನ್ನು ಧಾರೆಯರೆಯುವ ಪಣತೊಟ್ಟಿತು. ಗ್ರಾಮೀಣ ಭಾಗಗಳಿಂದ ಬರುವ ಬಡಮಕ್ಕಳಿಗಾಗಿ ‘ವಿದ್ಯಾದಾನ ಸಮಿತಿ ಗದಗ’ ಎಂಬ ನಾಮಧ್ಯೇಯದೊಂದಿಗೆ ವಕೀಲಚಾಳದಲ್ಲಿರುವ ಶ್ರೀ ನಾರಾಯಣರಾವ್ ಕುರ್ತಕೋಟಿಯವರ ಮನೆಯ ಮುಂದಿನ ವಿಶಾಲವಾದ ಪರಿಸರದಲ್ಲಿ 8 ವಿದ್ಯಾರ್ಥಿಗಳಿಂದ ಪ್ರಥಮವಾಗಿ ಶ್ರೀ ಜಿ.ಕೆ.ಶಿರಹಟ್ಟಿ ಶಿಕ್ಷಕರಿಂದ ಆಂಗ್ಲ ಪದ್ಧತಿಯ ಶಿಕ್ಷಣ ದೊರಕಿಸಲು ಹೊಸ ಆಸೆ-ಆಶೋತ್ತರಗಳೊಂದಿಗೆ ನದಿಯ ಚಿಕ್ಕ ತೊರೆಯಂತೆ ಪ್ರಾರಂಭಗೊಂಡಿತು. ಈ ಚಿಕ್ಕತೊರೆ ದಶಕಗಳು ಗತಿಸಿದಂತೆ ವಿಸ್ತಾರವಾಗಿ ಹರಿದು ಈಗ ಉತ್ತರ ಕರ್ನಾಟಕದ ಭಾಗದಲ್ಲಿ ಮಹತ್ವದ ಶಿಕ್ಷಣ ಸಂಸ್ಥೆಯಾಗಿ ನಮ್ಮೆದುರು ಕಂಗೊಳಿಸುತ್ತಿದೆ.
ಈಗಾಗಲೇ ಶತಮಾನೋತ್ಸವ ಕಂಡಿರುವ ವಿದ್ಯಾದಾನ ಸಮಿತಿಯ ಮಹಾನ ಪ್ರೇರಕ ಶಕ್ತಿ ಗದಗ-ಬೆಟಗೇರಿಯಲ್ಲಿಯ ‘ಯಂಗ್ ಮ್ಯಾನ್ ಪುಟಬಾಲ್‍ಕ್ಲಬ್’. ಈ ಕ್ಲಬ್ಬಿನಲ್ಲಿ ಮುಖ್ಯವಾಗಿ ಸರ್ವ ಶ್ರೀ ಎನ್.ವಿ.ಹುಯಿಲಗೋಳ, ಎನ್.ಕೆ. ಹುಯಿಲಗೋಳ, ಎಸ್.ಕೆ ಹುಯಿಲಗೋಳ, ಎಂ.ಬಿ. ಕುಲಕರ್ಣಿ, ಗುರಪ್ಪಟೆಂಗಿನಕಾಯಿ, ಡಾ.ವಿ.ಎಸ್. ಉಮಚಗಿ ಮೊದಲಾದ ಗಣ್ಯ ವ್ಯಕ್ತಿಗಳು ಸದಸ್ಯರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರು. ಈ ತರುಣರು ಪುಟ್‍ಬಾಲ್ ಆಟದಲ್ಲಿ ಪ್ರಸಿದ್ಧಿ ಪಡೆದು ಕರ್ನಾಟಕದಲ್ಲಿ ಒಳ್ಳೆಯ ಹೆಸರು ಪಡೆದರು. ಕರ್ನಾಟಕ ಏಕೀಕರಣದ ಶಕ್ತಿಯನ್ನು ಉದ್ದೀಪನಗೊಳಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಸರ್ವಕಾಲಿಕ ಸತ್ಯವನ್ನು ಸಾರುತ್ತಿರುವ ಈ ಮಧುರ ಗೀತೆಯನ್ನು ರಚಿಸಿದ ಹುಯಿಲಗೋಳ ನಾರಾಯಣರಾಯರು ಪ್ರಸಿದ್ಧ ವಕೀಲರು, ಸಮಾಜ ಸುಧಾರಕರು, ಅದ್ವಿತೀಯ ನಾಟಕಕಾರರಾಗಿದ್ದರು. ಅವರ ಆದರ್ಶಗಳಿಂದ ಪ್ರೇರಿತರಾದ ಅವರ ಸಹೋದರ ಸಂಬಂಧಿಗಳಾದ ಶ್ರೀ ಎನ್. ವ್ಹಿ. ಹುಯಿಲಗೋಳ (ಇವರು ಗೌರವ ಮ್ಯಾಜಿಸ್ಟ್ರೇಟ ‘ಸಾಬ್ ನಾರಾಯಣರಾವ’ ಎಂಬ ಕೀರ್ತಿಗೆ ಪಾತ್ರರಾದವರು) ಮತ್ತು ಶ್ರೀನಿವಾಸರಾವ್ ಹುಯಿಲಗೋಳರವರ ಹಿರಿತನದಲ್ಲಿ ಈ ಶಾಲೆ ಪ್ರಾರಂಭವಾಯಿತು. ಇಂತಹದೇ ಸದಾಶಯ ಇರಿಸಿಕೊಂಡಿದ್ದ ಅವರ ಮಿತ್ರರಾದ ಡಾ. ಜಿ. ಜಿ. ಪಾಗೆ, ಶ್ರೀ ನಾರಾಯಣಾಚಾರ್ಯ ಗುಡಿ, ಶ್ರೀ ಎಂ. ಬಿ ಕುಲಕರ್ಣಿ ಮುಂತಾದ ಶಿಕ್ಷಣ ಪ್ರೇಮಿಗಳು ಈ ಮಹೋನ್ನತ ಸಂಸ್ಥೆಗೆ ಅಸ್ಥಿಭಾರ ಹಾಕಿದ ಪ್ರಮುಖರಲ್ಲಿ ಪ್ರಮುಖರು. ಈ ಎಲ್ಲ ಮಹನೀಯರು ‘ಯಂಗ್ ಮ್ಯಾನ ಪುಟಬಾಲ್ ಕ್ಲಬ್’ನ ವ್ಯಾಪ್ತಿಯನ್ನು ವಿಸ್ತರಿಸಿ ಅದಕ್ಕೆ ಹೊಸ ಮೆರುಗು ತಂದು ಕೊಟ್ಟವರು.
ಶ್ರೀ ನಾರಾಯಣ ಹುಯಿಲಗೋಳರವರು ಪ್ರಥಮವಾಗಿ ರಚಿಸಿದ ವಜ್ರಮುಕುಟ ಎಂಬ ನಾಟಕವು ಬ್ರಿಟೀಷ ಸಾಮ್ರಾಜ್ಯ ಪಂಚಮ ಜಾರ್ಜ ಬಾದಶಹರ ಪಟ್ಟಾಭಿಷೇಕದ ಮಹೋತ್ಸವದಂದು ದಿನಾಂಕ: 12-11-1911 ರಂದು ಪ್ರದರ್ಶಿಸಲ್ಪಟ್ಟಿತ್ತು. ಹೀಗೆ ಈ ಮಹನೀಯರು ರಚಿಸಿದ ಭಾರತ ಸಂಧಾನ, ಸ್ತ್ರೀ ಧರ್ಮರಹಸ್ಯ, ಶಿಕ್ಷಣ ಸಂಭ್ರಮ, ಶ್ರೀ ವಿದ್ಯಾರಣ್ಯ ಮೊದಲಾದ ಸಾಮಾಜಿಕ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳು ಕನ್ನಡನಾಡಿನಾದ್ಯಂತ ಪ್ರದರ್ಶನಗೊಂಡು ಜನರ ಮನಸ್ಸನ್ನು ಸೆಳೆದವು. ಇದರಿಂದ ಬಂದ ಹಣವು ವಿದ್ಯಾದಾನ ಸಮಿತಿಯ ಮೂಲ ಸ್ತ್ರೋತವಾಯಿತು. ಸಂಸ್ಥೆ ಬೆಳೆದಂತೆ ಸ್ಧಳದ ಅಭಾವ ಕಂಡು ಸಾಬ್ ನಾರಾಯಣರಾಯರು ಶಾಲೆಗೆ ಹೊಸ ಕಟ್ಟಡ ಬೇಕೆಂಬ ಉದಾತ್ತ ಆಶಯ ವಿರಿಸಿಕೊಂಡು ಹಣದ ಕೊರತೆ ಇದ್ದರೂ ಅದನ್ನು ಪ್ರಾರಂಭಿಸಿಯೇ ಬಿಟ್ಟರು. 1935 ರಲ್ಲಿ ಬಾಡಿಗೆ ಮನೆಯಿಂದ ಶಾಲೆಯನ್ನು ಸ್ವಂತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಮುಂದೆ ಹಣದ ಅವಶ್ಯಕತೆ ಉಂಟಾದಾಗ ಗದುಗಿನ ನೂಲಿನ ವ್ಯಾಪಾರಸ್ಥರಾದ ಚವ್ಹಾಣ ಬಂಧುಗಳು ತಮ್ಮ ತಂದೆಯವರ ಹೆಸರಿನಲ್ಲಿ ರೂ10,001 ದೇಣಿಗೆ ನೀಡಿದ್ದಕ್ಕೆ ಪ್ರೌಢಶಾಲೆಗೆ ‘ವಿದ್ಯಾದಾನ ಸಮಿತಿ ತುಕಾರಾಮಸಾ ಚವ್ಹಾಣ ಗಂಡು ಮಕ್ಕಳ ಪ್ರೌಢಶಾಲೆ’ ಎಂದು ನಾಮಕರಣ ಮಾಡಲಾಯಿತು. ಗಂಡು ಮಕ್ಕಳ ಶಾಲೆಯಾಗಿ ಸ್ಥಿತಗೊಂಡ ಕಟ್ಟಡ ಈಗ ಅದು ವಿಜ್ಞಾನದ ಪ್ರಯೋಗ ಶಾಲೆಯ ಹೆಸರು ಪಡೆದುಕೊಂಡಿದೆ. ದಿನಗಳೆದಂತೆ ಅನೇಕ ದಾನಿಗಳ ಮುಕ್ತ ನೆರವಿನಿಂದಾಗಿ ಶ್ರೀಮತಿ ಮೋಹನಾಬಾಯಿ ತುಕಾರಾಮಸಾ ಚವ್ಹಾಣ ಮೆಮೋರಿಯಲ್ ಹಾಲ್ (ಡ್ರಾಯಿಂಗ್ ಹಾಲ್), ರಾವ ಸಾಹಬ ಜಿ. ಕೆ.ಗೋಖಲೆ ವಿಂಗ್, ಶ್ರೀ ವ್ಹಿ. ಎನ್. ಚಾಪೇಕರ ಮೆಮೋರಿಯಲ್ ಹಾಲ್ ಕಟ್ಟಡಗಳು ಅಂಗ್ಲ ಭಾಷೆಯ ‘ಯು’ ವರ್ಣದಂತೆ ರೂಪಗೊಂಡವು. ಇವರು ನೀಡಿದ ಹಣದ ದಾನದಿಂದಾಗಿ ಪ್ರೇರಿತಗೊಂಡ ಅನೇಕ ದಾನಿಗಳು ತಮ್ಮ ಯಥಾಶಕ್ತಿ ಧನ ಸಹಾಯ ಮಾಡಿದರು. ಈ ಧನದ ಸದ್ವಿನಿಯೋಗವನ್ನು ಸಮರ್ಥರೀತಿಯಿಂದ ವಿನಿಯೋಗಿಸಿ ಎನ್. ವ್ಹಿ. ಹುಯಿಲಗೋಳ (ಸಾಬ್ ನಾರಾಯಣರಾಯರು) ಈ ಶಾಲೆಯಕಟ್ಟಡ ನಿರ್ಮಿಸಿ ಸಾರ್ಥಕ್ಯ ಪಡೆದುಕೊಂಡರು.
ವಿದ್ಯಾದಾನ ಎಲ್ಲ ದಾನಗಳಿಗಿಂತ ಶ್ರೇಷ್ಠದಾನ ಎಂಬುದನ್ನು ಸ್ಥಿರಗೊಳಿಸಲು ಈ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾಗಿ ದಿ. ಜಿ. ಕೆ. ಹುನಗುಂದ, ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ದ. ರಾ. ಬೇಂದ್ರೆ ನಂತರ ಸತತ 34 ವರ್ಷಗಳ ಕಾಲ ಶಾಲೆಯ ಶಿಕ್ಷಣ ಗುಣಮಟ್ಟವನ್ನು ಎತ್ತರಿಸಲು ಅಹರ್ಣಿಶಿ ಶ್ರಮಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿ.ಕೆ.ಎಸ್. ಎನ್. ಅಯ್ಯಂಗಾರರವರು ಇದರ ಕೀರ್ತಿಯನ್ನು ರಾಷ್ಟ್ರಾದ್ಯಂತ ವಿಸ್ತರಿಸಿ ಧನ್ಯತೆಯ ಭಾವವನ್ನು ಮೆರೆದರು. ಈ ಕೀರ್ತಿಗೆ ಭಾಜನರಾದವರಲ್ಲಿ ಹುಯಿಲಗೋಳ ಧರ್ಮರಾಯರು ಅವರನ್ನು ಸ್ಮರಿಸಲೇಬೇಕು. ಈ ಎಲ್ಲ ಮಹಾನುಭಾವರು ಉತ್ತಮ ಶಿಕ್ಷಣದೊಂದಿಗೆ ಸಾಹಿತ್ಯ, ಸಾಂಸ್ಕೃತಿಕ, ಸಂಗೀತ, ನಾಟಕಗಳನ್ನು ಪರಿಚಯಿಸಿ ವಿದ್ಯಾರ್ಥಿಗಳ ಸರ್ವತೋ ಮುಖ ಬೆಳವಣಿಗೆಗಾಗಿ ಶ್ರಮಿಸಿದರು. ಗೌರವ ಉಪಾಧ್ಯಕ್ಷರಾಗಿ ಸಮರ್ಥ ನೆರವು ನೀಡಿದ ಭೀಮರಾವ ಹುಯಿಲಗೋಳ ಅವರು ಸಹ ಈ ಯಶಸ್ಸಿನಲ್ಲಿ ಪಾಲುದಾರರು. ಈ ಮಹನಿಯರು ಸ್ತ್ರೀ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಇನ್ನೂ ‘ಮೈಸೂರು’ ಪ್ರಾಂತವಾಗಿ ನಿರ್ಮಾಣಗೊಳ್ಳುವ ಮುನ್ನವೇ ಮುಂಬೈ ಸರ್ಕಾರದ ನೆರವಿನೊಂದಿಗೆ ಸಹಾಯ ಪಡೆದುಕೊಂಡರು. ಈ ಕಟ್ಟಡದ ಅಡಿಗಲ್ಲನ್ನಿಡುವ ಸಮಾರಂಭವು ದಿ:04-12-1956 ನೇ ಶುಭ ದಿನದಂದು ನವ ಮೈಸೂರು ರಾಜ್ಯ ಶಿಕ್ಷಣ ಮಂತ್ರಿಗಳಾಗಿದ್ದ ಮಾನ್ಯ ಶ್ರೀ ಕಡಿದಾಳ ಮಂಜಪ್ಪನವರ ಅಮೃತ ಹಸ್ತದಿಂದ ನೆರವೇರಿಸಲ್ಪಟ್ಟಿತು. ಹೊಸದಾಗಿ ಪ್ರಾರಂಭವಾದ ಬಾಲಕಿಯರ ಪ್ರೌಢಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿ ಶ್ರೀ ಎಚ್. ಎಸ್. ಹುಯಿಲಗೋಳ ಅವರು ನಿಯುಕ್ತರಾದರು. ಆಗ ಸಿವಿಲ್ ಇಂಜಿನೀಯರ ಆಗಿದ್ದ ಶ್ರೀ ಆರ್. ಡಿ. ಕುರ್ತಕೋಟಿಯವರ ಮೇಲುಸ್ತುವಾರಿಯಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಲು ಅನುವಾದರು. ತಮ್ಮ ಪರಿವಾರದ ಸ್ವಆದಾಯವನ್ನು ಕಟ್ಟಡದ ನಿರ್ಮಾಣಕ್ಕಾಗಿಯೇ ಸದ್ವಿನಿಯೋಗ ಮಾಡಿದ ಧೀಮಂತರು ಭೀಮರಾವ್ ಹುಯಿಲಗೋಳರು. ಶಾಲಾ ಕಟ್ಟಡ ಪೂರ್ಣವಾಗೊಳಿಸಲು ಹಣದ ಅಭಾವದಿಂದ 1960ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಭೀಮರಾವ ಹುಯಿಲಗೋಳ ಅವರು ಸ್ವತಃ ಹತ್ತು ಸಾವಿರದಾ ಒಂದು ರೂಪಾಯಿ ಕೊಟ್ಟು ಶಾಲಾ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದರು. ಇದೆಲ್ಲವನ್ನು ಪ್ರತ್ಯಕ್ಷ ಕಂಡ ಸಮಿತಿಯವರು ಅವರ ಮಾತೋಶ್ರೀಯವರ ಸವಿನೆನಪಿಗಾಗಿ ಆ ಶಾಲೆಗೆ 'ವಿದ್ಯಾದಾನ ಸಮಿತಿ ಶ್ರೀಮತಿ ಸಾವಿತ್ರಿಬಾಯಿ ಪಾಂಡುರಂಗರಾವ್ ಹುಯಿಲಗೋಳ ಗರ್ಲ್ಸ್ ಹೈ ಸ್ಕೂಲ' ಎಂದು ನಾಮಕರಣವನ್ನು ಮಾಡಲಾಯಿತು. ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಮತ್ತು ಶ್ರೀಭಂಡಾರಕೆರೆ ಮಠದ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರ ಸಿದ್ಧ ಹಸ್ತಗಳಿಂದ ದಿ: ೨೬-0೧-೧೯೬೨ ನೇ ‘ಪ್ರಜಾರಾಜ್ಯದಿನೋತ್ಸವ’ ದಿನದಂದು ಶಾಲೆಯ ನಾಮಫಲಕ ಉದ್ಘಾಟನೆ ಮಾಡಲಾಯಿತು.
ಶ್ರೀ ಭೀಮರಾವ ಹುಯಿಲಗೋಳ ಇವರ ಅಧ್ಯಕ್ಷತೆಯ ಅಧಿಕಾರದ ಕಾಲಘಟ್ಟದಲ್ಲಿ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಪಥದತ್ತ ಸಾಗುತ್ತ, 1965 ರಲ್ಲಿ ಗಂಡು ಮಕ್ಕಳ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗ, 1971ರಲ್ಲಿ ಕಲಾ ವಿಭಾಗ ಹಾಗೂ 1973ರಲ್ಲಿ ಹೆಣ್ಣುಮಕ್ಕಳ ಪದವಿಪೂರ್ವ ಕಾಲೇಜಿನ ಕಲಾ ವಿಭಾಗ ಪ್ರಾರಂಭಗೊಂಡವು. ಈ ಮಧ್ಯೆ ಶ್ರೀನಿವಾಸ ರಾವ್ ಕುಲಕರ್ಣಿ ಸಾ|| ಕಬ್ಬೂರ ತಮ್ಮ ಭೂಮಿಯನ್ನು ದಾನ ಮಾಡಿದ್ದರಿಂದ 1968ರಲ್ಲಿ ಅವರಧರ್ಮ ಪತ್ನಿಯವರಾದ ಶ್ರೀಮತಿ ಕಮಲಾಬಾಯಿ ಇವರ ಹೆಸರಿನಲ್ಲಿ ಶಿಶು ವಿಹಾರವನ್ನು ಹಾಗೂ 1981ರಲ್ಲಿ 1ರಿಂದ 4ನೇ ತರಗತಿಯ ವಿದ್ಯಾದಾನ ಸಮಿತಿ ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಲಾಯಿತು. ಭೀಮರಾವ ಹುಯಿಲಗೋಳ ಇವರು ಜೀವಿತಾವಧಿಯವರೆಗೂ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರಲ್ಲದೇ 1992ರ ವರೆಗೂ ತಮ್ಮ ಅಧಿಕಾರದ ಅವಧಿಯಲ್ಲಿ ವಿದ್ಯಾದಾನ ಸಮಿತಿಯ ಶಿಕ್ಷಣ ಸಂಸ್ಥೆಯು ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಕರ್ತರಾದರು.
ಅವರ ಕಾಲಾನಂತರ ಅವರ ಧರ್ಮಪತ್ನಿ ಶ್ರೀಮತಿ ಮನೋರಮಾಬಾಯಿಯವರು ವಿದ್ಯಾದಾನ ಸಮಿತಿಯ ಅಧ್ಯಕ್ಷರಾಗಿ ಆ ಸ್ಥಾನಕ್ಕೆ ಗೌರವ ತಂದುಕೊಟ್ಟರು. ಅವರ ಸದಾಶಯಕ್ಕೆ ಅನುಗುಣವಾಗಿ ಹೊಲಿಗೆ ಮತ್ತು ಕಸೂತಿಯ ಕಲೆಗೆ ಪ್ರೋತ್ಸಾಹ ನೀಡಲು ವೃತ್ತಿ ಆಧಾರಿತ ಡಿಪ್ಲೋಮಾ ಕೋರ್ಸ (ಜೆಓಡಿಸಿ) ಪ್ರಾರಂಭಿಸಿದರು. ಈಗಿನ ಶಿಕ್ಷಣ ವ್ಯವಸ್ಥೆಯ ಅತ್ಯಂತ ಮಹತ್ವದ ಅಂಗವಾಗಿರುವ ಕಂಪ್ಯೂಟರ ತರಬೇತಿ ಗುಣಮಟ್ಟವನ್ನು ಹೆಚ್ಚಿಸಲು ಶ್ರೀ ಬಿ. ಪಿ. ಹುಯಿಲಗೋಳ ಕಂಪ್ಯೂಟರ್ ಲ್ಯಾಬ್‍ನ್ನು ಬಾಲಕಿಯರ ಪ್ರೌಢ ಶಾಲೆಯ ಆವರಣದಲ್ಲಿ ಪ್ರಾರಂಭಿಸಿರುವುದು ವಿದ್ಯಾದಾನ ಸಮಿತಿಯ ಹಿರಿಮೆಯಾಗಿದೆ, ಈ ಶ್ರೇಯಸ್ಸು ಮಾತೆ ಮನೋರಮಾ ಬಾಯಿಯವರಿಗೆಯೇ ಸಲ್ಲುತ್ತದೆ.
ನಂತರ ಅವರ ಪುತ್ರರಾದ ಶ್ರೀ ಧೀರೇಂದ್ರ ಹುಯಿಲಗೋಳರವರು ಅಧ್ಯಕ್ಷರಾಗಿ ಹಾಗೂ ಶ್ರೀ ಶ್ರೀನಿವಾಸ ಹುಯಿಲಗೋಳರವರು ಕಾರ್ಯದರ್ಶಿಗಳಾಗಿ ಅಧಿಕಾರವಹಿಸಿಕೊಂಡರು. ಈರ್ವರು ಸಹೋದರರು ತಮ್ಮ ಮಾತೆಯ ಹೆಸರನ್ನು ಚಿರಸ್ಥಾಯಿಗೊಳಿಸಲು 2004 ರಲ್ಲಿ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯನ್ನು(JODC) ಸ್ಥಾಪಿಸುವ ಮೂಲಕ ಉತ್ತಮ ಶಿಕ್ಷಕರನ್ನು ಹೊರತರಲು ಪರಿಶ್ರಮಿಸುತ್ತಿದ್ದಾರೆ.
ವಿದ್ಯಾದಾನ ಸಮಿತಿಯು ಕಲೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಸದಾ ಮೈಗೂಡಿಸಿಕೊಂಡು ಬಂದಂತಹ ಸಂಸ್ಥೆಯಾಗಿದ್ದು, ಜೀವನದ ಮಹತ್ವದ ಅಂಗವಾದ ‘ಚಿತ್ರಕಲೆ’ಯನ್ನುಪ್ರೋತ್ಸಾಹಿಸಲು, 1980ರಲ್ಲಿ ‘ಅಖಿಲ ಭಾರತಕುರುಹಿನಶೆಟ್ಟಿ ಸಂಘ (ರಿ) ಬೆಂಗಳೂರು’ ಇದರ ಆಶ್ರಯದಲ್ಲಿ ಪ್ರಾರಂಭಗೊಂಡು ಅಳುವಿನ ಅಂಚಿನಲ್ಲಿದ್ದ ಅನುದಾನಿತ ಜೆ. ಎನ್. ಮಹಾವಿದ್ಯಾಲಯವನ್ನು, ವಿದ್ಯಾದಾನ ಸಮಿತಿಯು ತನ್ನ ವ್ಯಾಪ್ತಿಗೆ 2006 ರಲ್ಲಿ ಹಸ್ತಾಂತರಿಸಿಕೊಂಡು, ಈ ಮೂಲಕ ದೃಶ್ಯ ಕಲಾ ಮೂಲ ಪ್ರಥಮ, ದ್ವಿತೀಯ ಹಾಗೂ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ (B.V.A) ‘ಚಿತ್ರಕಲಾ’ ಪದವಿ ತರಬೇತಿಗಳನ್ನುನೀಡಲಾಗುತ್ತಿದೆ.
ಸಂಸ್ಥೆಯಲ್ಲಿ ಸೇವೆಸಲ್ಲಿಸುತ್ತಿರುವ ಶಿಕ್ಷಕರ, ಪಾಲಕರ ಹಾಗೂ ಹಳೆಯ ವಿದ್ಯಾರ್ಥಿಗಳ ಒತ್ತಾಸೆಯ ಮೇರೆಗೆ 2013ರಲ್ಲಿ ವಿದ್ಯಾದಾನ ಸಮಿತಿ ಕ್ಲಾಸಿಕ್ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಮಾಧ್ಯಮಿಕ ಆಂಗ್ಲ ಮಾದ್ಯಮ ಶಾಲೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ಇವರ ನೇತೃತ್ವದಲ್ಲಿ ಪ್ರಾರಂಭಿಸಿ, ಇವರ ಮಾರ್ಗದರ್ಶನದಿಂದ ಈ ಶಾಲೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಈ ಶಾಲೆಗೆ ಸಿ.ಬಿ.ಎಸ್.ಇ.(CBSE) ಮಾನ್ಯತೆ ಸದ್ಯದಲ್ಲಿಯೇ ದೊರಕಲಿದೆ.
“ವಿದ್ಯಾಕ್ಷೇತ್ರ ನಿಂತ ನೀರಲ್ಲ, ಸದಾ ಹರಿಯುವ ನೀರು”. ವಿದ್ಯಾದಾನ ಸಮಿತಿ ವಿದ್ಯಾರ್ಥಿಗಳ ಬೇಡಿಕೆಗೆ ಮನ್ನಣೆಯಿಟ್ಟು ಪದವಿ ಪೂರ್ವ ತರಗತಿಯಲ್ಲಿ ‘ಶಿಕ್ಷಣ ಶಾಸ್ತ್ರ’ ವಿಷಯವನ್ನು ಪ್ರಾರಂಭಿಸಿದೆ. ಕರ್ನಾಟಕ ರಾಜ್ಯದ ಯೋಜನೆಯಾದ ಬಿಸಿಯೂಟದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲು ಅದಕ್ಕಾಗಿಯೇ ಸಿಬ್ಬಂದಿಯ ಸಹಕಾರದೊಂದಿಗೆ ಬಿಸಿಯೂಟದ ಅಡುಗೆಕೋಣೆ ಹಾಗು ದವಸಧಾನ್ಯ ಇರಿಸಲು ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಯಾವುದೇ ಒಂದು ಮಹತ್ವದ ಸಂಸ್ಥೆ ತನ್ನ ಪ್ರಾರಂಭವನ್ನು ಕಿರಿದಾಗಿ ಪ್ರಾರಂಭಿಸಿದರೂ ವರುಷಗಳು ಕಳೆದಂತೆ ಬೃಹತ್ ಸಂಸ್ಥೆಯಾಗಿ ಮಾರ್ಪಡುತ್ತದೆ. ಅದಕ್ಕೆ ಹೊರತಾಗಿರದ ವಿದ್ಯಾದಾನ ಸಂಸ್ಥೆ ತನ್ನ ಶತಮಾನದ ನಡುಗೆಯಲ್ಲಿ ಮೂಲ ಆಶಯಗಳಿಗೆ ಕಿಂಚಿತ್ತು ಚ್ಯುತಿ ಬರದಂತೆ ಹೊಸತನವನ್ನು ಮೈಗೂಡಿಸಿಕೊಳುತ್ತ ಸಾಗಿರುವುದು ಈ ಸಂಸ್ಥೆಯ ಗರಿಮೆಯಾಗಿದೆ. ಸಂಸ್ಥೆ ಸ್ಥಾಪಿಸಿದ ಹಿರಿಯರು ತಮ್ಮ ಸುತ್ತಮುತ್ತಲಿನ ಸಮಾಜದ ಶ್ರೇಯಸ್ಸನ್ನೇ ತಮ್ಮ ಆದರ್ಶವಾಗಿರಿಸಿ ಕೊಂಡಿದ್ದರಿಂದಲೇ ವರಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದದ.ರಾ. ಬೇಂದ್ರೆ, ಖ್ಯಾತ ವಿಮರ್ಶಕರಾದ ಪ್ರೊ.ಕೀರ್ತಿನಾಥ ಕುರ್ತಕೋಟಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿ.ಕೆ.ಎಸ್.ಎನ್. ಅಯ್ಯಂಗಾರರಂತಹ ಮಹಾನ ವ್ಯಕ್ತಿಗಳು ಈ ಸಂಸ್ಥೆಯಲ್ಲಿ ತಮ್ಮ ಅನುಪಮ ಸೇವೆ ಸಲ್ಲಿಸುವಂತಾಯಿತು. ದಿ. ಕೀರ್ತಿನಾಥ ಕುರ್ತಕೋಟಿ ತಾವು ವಿದ್ಯಾದಾನ ಸಮಿತಿಯಲ್ಲಿ 1950ರ ದಶಕದಲ್ಲಿ ಶಿಕ್ಷಕನಾಗಿ ಸೇವೆಸಲ್ಲಿಸಿದ್ದೆ ಎಂಬುದನ್ನು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದರು. ಅವರು ಹಾಗೆ ಹೇಳುವಾಗ ಕಣ್ಣಲ್ಲಿ ಮಿಂಚಿನ ಹೊಳೆ ಹರಿದಂತಾಗುತ್ತಿತ್ತು. ಅವರಿಗೆ ಹುಯಿಲಗೋಳ ನಾರಾಯಣರಾಯರು, ದ.ರಾ. ಬೇಂದ್ರೆಯಂತಹ ಮಹನೀಯರು ಅನುಪಮ ಕೊಡುಗೆಯಿತ್ತ ಸಂಸ್ಥೆಯೊಂದರಲ್ಲಿ ತಾವು ಸಹ ಸೇವೆಸಲ್ಲಿಸಿದಕ್ಕೆ ಅವರಲ್ಲಿ ಸಾರ್ಥಕ್ಯ ಭಾವ ನೆಲೆ ನಿಂತಿತ್ತು.
1946 ರಲ್ಲಿ ರಜತ ಮಹೋತ್ಸವವು ಆಗಿನ ಮುಂಬೈ ಪ್ರಾಂತ್ಯದ ಮುಖ್ಯಮಂತ್ರಿಗಳಾದ ಶ್ರೀ ಬಾಳಾಸಾಹೇಬ್ ಖೇರ್ ದಂಪತಿಗಳ ಅಧ್ಯಕ್ಷತೆಯಲ್ಲಿ ಜರುಗಿತು. ಮುಂದೆ 1973 ರಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವವು ಆಗಿನ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವರಾದ ಶ್ರೀ ಬದರಿ ನಾರಾಯಣ,ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ಎ.ಎನ್. ಅಡ್ಕೆಮತ್ತು ಕೃಷಿ ಹಾಗೂ ಅರಣ್ಯ ಖಾತೆಯ ಸಚಿವರಾಗಿದ್ದ ಹುಲಕೋಟಿಯ ಶ್ರೀ ಕೆ. ಎಚ್. ಪಾಟೀಲ ರವರ ಉಪಸ್ಥಿತಿಯಲ್ಲಿ ಜರುಗಿತು. ತದನಂತರ 1984 ರಲ್ಲಿ ಸಂಸ್ಥೆಯ ವಜ್ರ ಮಹೋತ್ಸವವು ಕೇಂದ್ರದ ಮಾಜಿ ಆರೋಗ್ಯ ಮಂತ್ರಿಗಳಾದ ಶ್ರೀ ಡಿ. ಪಿ.ಕರಮರಕರ, ಅಂದಿನ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ|| ಎಸ್.ಜಿ.ದೇಸಾಯಿ, ಗದುಗಿನ ಶಾಸಕರಾಗಿದ್ದ ಶ್ರೀ ಸಿ.ಎಸ್. ಮುತ್ತಿನಪೆಂಡಿಮಠರವರ ಉಪಸ್ಥಿತಿಯಲ್ಲಿ ಜರುಗಿದ್ದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.
ಪ್ರಸ್ತುತ 2022 ರಲ್ಲಿ ಶತಮಾನ ಪೂರೈಸಿದ ವಿದ್ಯಾಸಂಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿ ಇದ್ದು, ತಮ್ಮ ಈ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದ ತಮ್ಮ ಜ್ಞಾನದೇಗುಲವಾದ ಈ ಶಾಲೆಯನ್ನುಅನನ್ಯವಾಗಿ ನೆನೆಯುತ್ತಿರುವುದು ‘ವಿದ್ಯಾದಾನ ಸಮಿತಿಯ ಕೀರ್ತಿಯನ್ನು’ ನೂರ್ಮಡಿಗೊಳಿಸಿದೆ.
ಬರೆದವರು - ಶ್ರೀ ಶ್ರೀನಿವಾಸ ಬಿ ವಾಡಪ್ಪಿ
*ವಿದ್ಯಾದಾನ ಸಮಿತಿ ನಡೆದು ಬಂದ ದಾರಿ*